ಶ್ರೀ ಕ್ಷೇತ್ರ
ಪರಿಚಯ

ದಕ್ಷಿಣ ಕನ್ನಡ ಜಿಲ್ಲೆಯ ಬಂಟ್ವಾಳ ತಾಲೂಕು ನಾವೂರು ಗ್ರಾಮದಲ್ಲಿ ನೆಲೆಸಿರುವ "ಶ್ರೀ ಸುಬ್ರಾಯ ವಿಷ್ಣುಮೂರ್ತಿ ನಾವೂರೇಶ್ವರ ದೇವಸ್ಥಾನ". ಜಗದ್ಗುರು ಶ್ರೀ ಮಧ್ವಾಚಾರ್ಯರ ಪಾದಸ್ಪರ್ಶದಿಂದ ಪುನೀತವಾದ ನಾವೂರು ನಾರಾಯಣನ ಊರು. ಶ್ರೀ ಸೋದೆ ವಾದಿರಾಜತೀರ್ಥರು ತಮ್ಮ ಪಟ್ಟ ಶಿಷ್ಯ ಶ್ರೀ ವೇದವೇದ್ಯ ತೀರ್ಥರೊಂದಿಗೆ ನಾವೂರು ಅಗ್ರಹಾರಕ್ಕೆ ಬೇಟಿ ನೀಡಿದ ಸಂದರ್ಭ. ಶ್ರೀ ವೇದವೇದ್ಯರು ಸ್ನಾನಕ್ಕೆಂದು ನೇತ್ರಾವತಿ ನದಿಗೆ ಹೋಗಿದ್ದರು. ನದಿಯಲ್ಲಿ ನೀರಿನ ಹರಿವು ಕಡಿಮೆ ಇದ್ದ ಕಾರಣ ತಮ್ಮ ಮಂತ್ರ ದಂಡವನ್ನು ನದಿಗೆ ಅಡ್ಡವಾಗಿಟ್ಟರು. ಇದರಿಂದಾಗಿ ನದಿಯ ಕೆಳಭಾಗಕ್ಕೆ ನೀರಿನ ಹರಿವು ನಿಂತ ಕಾರಣ ಮೊದಲೇ ಬರಗಾಲಕ್ಕೆ ತುತ್ತಾಗಿದ್ದ ನದಿ ಪಾತ್ರದ ಕೆಳಗೆ ನೀರಿನ ಕೊರತೆಯಾಯಿತು ಇದನ್ನರಿತ ನಂದಾವರದ ಅರಸರು ನಾವೂರು ಅಗ್ರಹಾರ ಮಠಕ್ಕೆ ಬಂದು ಶ್ರೀ ವಾದಿರಾಜ ತೀರ್ಥರಲ್ಲಿ ಪ್ರಾರ್ಥಿಸಿಕೊಂಡಾಗ ಶ್ರೀ ವಾದಿರಾಜರು ದ0ಡವನ್ನು ತೆಗಿಸಿ ನೀರಿನ ಹರಿವಿಗೆ ಅವಕಾಶ ಮಾಡಿಕೊಟ್ಟರು. ಇದರಿಂದ ಸಂತುಷ್ಟರಾದ ಅರಸರು ನಾವೂರಿನ ಮತ್ತು ಸುತ್ತ ಮುತ್ತಲಿನ ಕೆಲಭಾಗವನ್ನು ಶ್ರೀ ಸೋದೆ ಮಠಕ್ಕೆ ದಾರೆ ಎರೆದರು. ಶ್ರೀ ವೇದವೇದ್ಯ ತೀರ್ಥರು ದಂಡವನ್ನಿಟ್ಟ ನೇತ್ರಾವತಿಯ ಜಾಗವು ದಂಡ ತೀರ್ಥ ಎಂದೂ(ನೀರಕಟ್ಟೆ) ಪ್ರಸಿದ್ದವಾಯಿತು.

ದಂಡತೀರ್ಥದ ವಿಶೇಷತೆಯೆಂದರೆ ಈ ಜಾಗದಲ್ಲಿ ನದಿಯ ನೀರು ಒಮ್ಮೆ ಪೂರ್ವಾಭಿಮುಖವಾಗಿ ತಿರುಗಿ ನಂತರ ಪಶ್ಚಿಮಕ್ಕೆ ಹರಿಯುತ್ತದೆ. ಇದೇ ಜಾಗದಲ್ಲಿ ಶ್ರೀ ದೇವರ ಅವಭೃತ ಸ್ನಾನವು ನಡೆಯುತಿತ್ತು. ನಂದಾವರದ ಅರಸರಿಂದ ದಾನರೂಪವಾಗಿ ನೀಡಲ್ಪಟ್ಟ ಜಾಗದಲ್ಲಿ ಸ್ಥಾನೀಕ ಬ್ರಾಹ್ಮರು ಪೂಜಿಸುತ್ತಿದ್ದ ಶಿವ ದೇವರ ಗುಡಿಯು ಇದ್ದು ಅದರ ಸಮೀಪವೇ ಭವ್ಯ ಶ್ರೀ ವಿಷ್ಣುಮೂರ್ತಿ ದೇವಾಲಯವು ಸಕಲ ರಾಜ ಮರ್ಯಾದೆಯೊಂದಿಗೆ ನಿರ್ಮಿಸಲ್ಪಟ್ಟಿತು. ಈ ದೇವಸ್ಥಾನವು ಸಕಲ ಸಂಪದ್ಭರಿತ ದೇವಾಲಯವಾಗಿ ಬ್ರಹ್ಮರಥೋತ್ಸವಾದಿಯಾಗಿ ಸಕಲ ಪಂಚಪರ್ವಗಳೂ ಜರಗುತ್ತಿತ್ತು, ಸುತ್ತಮುತ್ತಲಿನ ಗ್ರಾಮಗಳ ಭಕ್ತರ ಗ್ರಾಮದೇವರಾಗಿ ಆರಾದಿಸಲ್ಪಡುತ್ತಿತ್ತು. ಪ್ರಕೃತಿ ವಿಕೋಪಗಳಿಂದ ತೀರ ದುಸ್ಢಿತಿಗೊಳಪಟ್ಟರು ಇದೀಗ ಭವ್ಯವಾದ ಶ್ರೀ ಸುಬ್ರಾಯ ವಿಷ್ಣುಮೂರ್ತಿ ದೇವರ ಗರ್ಭಗುಡಿ. ಶ್ರೀ ನಾವೂರೇಶ್ವರ(ಉಮಾಮಹೇಶ್ವರ) ದೇವರ ಗರ್ಭಗುಡಿಯ ತೀರ್ಥ ಮಂಟಪಾದಿಗಳು, ಸುತ್ತುಪೌಳಿಗಳು ಜೀರ್ಣೋದ್ಧಾರಗೊಂಡು ಸುಂದರ ದೇವಾಲಯ ನೀರ್ಮಾಣವಾಗಿದೆ. ಅನಾದಿ ಕಾಲದಿಂದಲೂ ಶ್ರೀ ಸುಬ್ರಾಯ ವಿಷ್ಣುಮೂರ್ತಿ ದೇವರು ಮದುವೆ, ಮಕ್ಕಳ ಸಂತಾನ ಭಾಗ್ಯ, ವಿದ್ಯೆ, ಆರೋಗ್ಯವನ್ನು ಭಕ್ತರಿಗೆ ಜಯ ಪಾಲಿಸುತ್ತಿದ್ದಾರೆ. ಭಕ್ತರು ವಿಶೇಷವಾಗಿ ವಿಷ್ಣುವಿಗೆ ಹರಕೆ ರೂಪದಲ್ಲಿ ರಂಗಪೂಜೆ, ಹಾಲುಪಾಯಸ, ಅಲಂಕಾರ ಪೂಜೆ, ಕಾರ್ತೀಕ ಪೂಜೆಯನ್ನು ಹರಕೆ ರೂಪದಲ್ಲಿ ತೀರಿಸುತ್ತಾರೆ. ಹಾಗೆ ಬೆಳ್ಳಿಯ ದನಕರು, ತೊಟ್ಟಿಲು ಮಗುವನ್ನು ಹರಕೆಯಾಗಿ ಸಲ್ಲಿಸುತ್ತಾರೆ. ಶ್ರೀ ನಾವೂರೇಶ್ವರ ದೇವರಿಗೆ ರುದ್ರಾಭಿಷೇಕವು ಹರಕೆ ರೂಪದಲ್ಲಿ ಸಲ್ಲಿಸಲಾಗುತ್ತಿದ್ದು ಭಕ್ತರಿಗೆ ಆರೋಗ್ಯ ಆಯುಷ್ಯವನ್ನು ದಯಪಾಲಿಸಿ ಭಕ್ತರನ್ನು ರಕ್ಷಿಸುತ್ತಿದ್ದಾರೆ. ಭಕ್ತರ ಅಭೀಷ್ಠವನ್ನು ಇಡೇರಿಸುವ ಪುಣ್ಯಕ್ಷೇತ್ರ ಶ್ರೀ ಸುಬ್ರಾಯ ವಿಷ್ಣುಮೂರ್ತಿ ನಾವೂರೇಶ್ವರ ಕ್ಷೇತ್ರ.

© 2020 - Shree Vishnumurthy Navooreshwara Temple Navoor. All rights reserved | Powered by DK

Free Web Hosting